Home

Municipal Reforms Cell, Directorate of Municipal Administration has won the Bronze Award for the project Aasthi (GIS based property tax information System) in National Awards for e-Governance 2011

 

ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಬಗ್ಗೆ ಸಂಕ್ಷಿಪ್ತ ಮಾಹಿತಿ

 

     ಹೊಳಲ್ಕೆರೆ ಪಟ್ಟಣ ಪಂಚಾಯಿತಿಯು 1996ನೇ ಸಾಲಿನಲ್ಲಿ ಪ್ರಾರಂಭಗೊಂಡಿತು. ಹೊಳಲ್ಕೆರೆ ಪಟ್ಟಣವು ಚಿತ್ರದುರ್ಗ - ಮಂಗಳೂರು ರಾಷ್ಟ್ರೀಯ ಹೆದ್ದಾರಿ 13ರ ಮಾರ್ಗದಲ್ಲಿ ಚಿತ್ರದುರ್ಗ ನಗರದಿಂದ 30 ಕಿ.ಮೀ. ದೂರದಲ್ಲಿದೆ. 2001ರ ಸೆನ್ಸಸ್ ಪ್ರಕಾರ ಪಟ್ಟಣದ ಜನಸಂಖ್ಯೆ 14574 ಇರುತ್ತದೆ. ಹೊಳಲ್ಕೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 15 ವಾರ್ಡ್ ಗಳಿದ್ದು, 15 ಜನ ಸದಸ್ಯರು ಹಾಗೂ 3 ಜನ ಸರ್ಕಾರಿ ನಾಮ ನಿರ್ದೇಶಿತ ಸದಸ್ಯರುಗಳಿರುತ್ತಾರೆ. ಪಟ್ಟಣದ ವಿಸ್ತೀರ್ಣ 6.25 ಚ.ಕಿ.ಮೀ. ಇರುತ್ತದೆ. ಹೊಳಲ್ಕೆರೆ ಪಟ್ಟಣದ ವಾರ್ಷಿಕ ಮಳೆಯ ಪ್ರಮಾಣ 602.4 ಮಿ.ಮೀ ಇದ್ದು ಉಷ್ಣಾಂಶ 15° ಸೆ. ನಿಂದ 40° ಸೆಲ್ಸಿಯಸ್ ವರೆಗೆ ಇರುತ್ತದೆ.

ಹೊಳಲ್ಕೆರೆ ಪಟ್ಟಣವು ತಾಲ್ಲೋಕು ಕೇಂದ್ರವೂ ಆಗಿರುವುದರಿಂದ ತಾಲ್ಲೋಕಿನ ಜನತೆ ಕಛೇರಿ ಕೆಲಸಗಳಿಗೆ ಹೊಳಲ್ಕೆರೆ ಪಟ್ಟಣಕ್ಕೆ ಬರಬೇಕಿದ್ದು ಕಛೇರಿ ವೇಳೆಯಲ್ಲಿ ಪಟ್ಟಣದಲ್ಲಿನ ಜನ ಸಾಂದ್ರತೆ ಹೆಚ್ಚಾಗಿರುತ್ತದೆ. ಹೊಳಲ್ಕೆರೆ ಪಟ್ಟಣದಲ್ಲಿರುವ ಪ್ರಮುಖ ಸರ್ಕಾರೀ ಕಛೇರಿಗಳೆಂದರೆ ತಾಲ್ಲೂಕು ಕಛೇರಿ, ಆರಕ್ಷಕ ಠಾಣೆ, ತಾಲ್ಲೋಕು ಪಂಚಾಯ್ತಿ ಕಛೇರಿ, ಸಮಾಜ ಕಲ್ಯಾಣ ಇಲಾಖೆ ಕಛೇರಿ, ಪಿ.ಡಬ್ಲು.ಡಿ. ಕಛೇರಿ, ಕೆ.ಪಿ.ಟಿ.ಸಿ.ಎಲ್. ಇತ್ಯಾದಿ. ಹೊಳಲ್ಕೆರೆ ಪಟ್ಟಣದಲ್ಲಿ ಸಾರ್ವಜನಿಕ ಆಸ್ಪತ್ರೆ ಸಹ ಇರುತ್ತದೆ.

ಚಿಕ್ಕಜಾಜೂರು ರೈಲ್ವೇ ಜಂಕ್ಷನ್ ಹೊಳಲ್ಕೆರೆ ಪಟ್ಟಣದಿಂದ ಸುಮಾರು 12 ಕಿ.ಮೀ. ದೂರದಲ್ಲಿದೆ. ಹೊಳಲ್ಕೆರೆ ಪಟ್ಟಣದ ಬಹತೇಕ ಜನರ ಪ್ರಮುಖ ಕಸುಬು ವ್ಯವಸಾಯವಾಗಿದ್ದು ಮೆಕ್ಕೆಜೋಳ, ರಾಗಿ, ಜೋಳ ಇಲ್ಲಿನ ಪ್ರಮುಖ ಬೆಳೆಗಳಾಗಿವೆ. ಅಡಿಕೆ ಹಾಗೂ ತೆಂಗು ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ.

ಹೊಳಲ್ಕೆರೆ ಪಟ್ಟಣವು ಸುಮಾರು 20 ಅಡಿ ಎತ್ತರದ ಬೃಹದಾಕಾರದ ಕಲ್ಲಿನ ಗಣಪನ ವಿಗ್ರಹಕ್ಕೆ ಹೆಸರುವಾಸಿಯಾಗಿದ್ದು, ಶ್ರೀ ಪ್ರಸನ್ನ ಗಣಪತಿ ದೇವಾಲಯವು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು ಪಟ್ಟಣದ ಜನತೆಯ ಹಾಗೂ ಅಕ್ಕ ಪಕ್ಕದ ಗ್ರಾಮ ಹಾಗೂ ಪಟ್ಟಣಗಳ ಪ್ರಮುಖ ಆರಾಧ್ಯ ದೈವವಾಗಿದೆ. ಅಲ್ಲದೆ ಹೊಳಲ್ಕೆರೆ ಪಟ್ಟಣವು ಐತಿಹಾಸಿಕ ಜೈನಬಸದಿಗಳಿಗೆ ಹಾಗೂ ಒಂಟಿ ಕಂಬದ ಮಠ (ಮುರುಘಾ ಮಠ)ಕ್ಕೆ ಹೆಸರುವಾಸಿಯಾಗಿದೆ. ಕುಕ್ಕುವಾಡೇಶ್ವರಿ ಜಾತ್ರಾ ಮಹೋತ್ಸವ ಹೊಳಲ್ಕೆರೆ ಪಟ್ಟಣ ಜನತೆ ಆಚರಿಸುವ ಜಾತ್ರೆಗಳಲ್ಲಿ ಪ್ರಮುಖ ಜಾತ್ರಾ ಮಹೋತ್ಸವವಾಗಿದೆ. ಶ್ರೀ ವೀರಭದ್ರೇಶ್ವರ ದೇವಸ್ಥಾನ, ಶ್ರೀಕಾಲಭೈರವ ದೇವಸ್ಥಾನ, ಶ್ರೀ ಬಂಡ್ಯಮ್ಮ ದೇವಿ ದೇವಸ್ಥಾನ ಪಟ್ಟಣದಲ್ಲಿರುವ ಪ್ರಮುಖ ದೇವಸ್ಥಾನಗಳಾಗಿವೆ.  ಹೊಳಲ್ಕೆರೆ ಪಟ್ಟಣದ ಪ್ರವಾಸೀ ತಾಣಗಳ ಸಮಗ್ರ ಮಾಹಿತಿ ಟೂರಿಸಂ ಲಿಂಕ್ ನಲ್ಲಿ ಲಭ್ಯವಿದೆ.

ಹೊಳಲ್ಕೆರೆ ಪಟ್ಟಣ ಪಂಚಾಯಿತಿಯ ಪ್ರಮುಖ ಧ್ಯೇಯೋದ್ದೇಶಗಳು:-

 

  • ಹೊಳಲ್ಕೆರೆ ಪಟ್ಟಣದ ನಾಗರೀಕರ ಮೂಲಭೂತ ಅವಶ್ಯಕತೆಗಳಾದ ಶುದ್ಧ ಕುಡಿಯುವ ನೀರು, ಬೀದಿ ದೀಪ ಹಾಗೂ ಪರಿಸರ ನೈರ್ಮಲ್ಯದ ಬಗ್ಗೆ ಪಟ್ಟಣ ಪಂಚಾಯಿತಿಯು ಪ್ರಮುಖ ಆದ್ಯತೆ ನೀಡಿರುತ್ತದೆ.
  • ಈ ನಿಟ್ಟಿನಲ್ಲಿ ಪಟ್ಟಣಕ್ಕೆ ಶಾಂತಿ ಸಾಗರದಿಂದ ಶುದ್ಧೀಕರಿಸಿದ ನೀರು ಸರಬರಾಜು ಮಾಡಲಾಗುತ್ತಿದೆ.
  • ಪಟ್ಟಣದಲ್ಲಿ ದಿನ ನಿತ್ಯ ಸ್ವಚ್ಛತೆ ಕಾಪಾಡುವ ಸಲುವಾಗಿ ಪಟ್ಟಣದ ದೈನಂದಿನ ತ್ಯಾಜ್ಯವನ್ನು ಘನ ತ್ಯಾಜ್ಯ ವಿಲೇವಾರಿ ಸ್ಥಳಕ್ಕೆ ರವಾನಿಸಲಾಗುತ್ತಿದ್ದು ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮನೆ - ಮನೆಗಳಿಗೆ ಬೇಟಿ ನೀಡಿ ಕಸ ಸಂಗ್ರಹಿಸುವ ಕಾರ್ಯವನ್ನೂ ಸಹ ಮಾಡಲಾಗುತ್ತಿದೆ. ಪಟ್ಟಣದಲ್ಲಿ ಸೊಳ್ಳೆಗಳ ಹಾವಳಿ ತಡೆಗಟ್ಟುವ ಉದ್ದೇಶದಿಂದ ಪ್ರತಿ ದಿನ ಫಾಗಿಂಗ್ ಮಾಡಲಾಗುತ್ತಿದೆ.
  • ಸರ್ಕಾರದ ವಿವಿಧ ಯೋಜನೆಗಳಾದ ಎಸ್.ಎಫ್.ಸಿ., ಬಿ.ಆರ್.ಜಿ.ಎಪ್. , ಸಿ.ಎಂ.ಎಸ್.ಎಂ.ಟಿ.ಡಿ.ಪಿ ಹಾಗೂ ಇನ್ನಿತರ ಯೋಜನೆಗಳಡಿಯಲ್ಲಿ ಪಟ್ಟಣದ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳಾದ ರಸ್ತೆ , ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
  • ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹಾಗೂ ಬಡತನ ನಿರ್ಮೂಲನೆಯ ನಿಟ್ಟಿನಲ್ಲಿ 22.75%, 7.25%, 3%, ನಮ್ಮ ಮನೆ ವಸತಿ ಯೋಜನೆ ಹಾಗೂ ಎಸ್.ಜೆ.ಎಸ್.ಆರ್.ವೈ ಇತ್ಯಾದಿ ಯೋಜನೆಗಳಡಿಯಲ್ಲಿ ಹಿಂದುಳಿದ ವರ್ಗಗಳ, ಆರ್ಥಿಕವಾಗಿ ಹಿಂದುಳಿದವರ, ವಿಕಲ ಚೇತನರ ಅಭಿವೃದ್ಧಿಗಾಗಿ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.
  • ಸಾರ್ವಜನಿಕ ಹಿತ ದೃಷ್ಟಿಯಿಂದ ಹಾಗೂ ಕಛೇರಿ ಕೆಲಸ ಕಾರ್ಯಗಳ ವ್ಯವಸ್ಥಿತ ನಿರ್ವಹಣೆಯ ಸದುದ್ದೇಶದಿಂದ ಹೊಳಲ್ಕೆರೆ ಪಟ್ಟಣ ಪಚಾಯಿತಿ ಕಛೇರಿ ಆಡಳಿತ ವ್ಯವಸ್ಥೆಯನ್ನು ಗಣಕೀಕರಣಗೊಳಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.
  • ಈ ನಿಟ್ಟಿನಲ್ಲಿ ಕರ್ನಾಟಕ ಪೌರ ಸುಧಾರಣಾ ಯೋಜನೆಯಡಿ ಪೌರಾಡಳಿತ ನಿರ್ದೇಶನಾಲಯ, ಪೌರ ಸುಧಾರಣಾ ಕೋಶ, ಬೆಂಗಳೂರುರವರ ಸಹಯೋಗದೊಂದಿಗೆ ಈಗಾಗಲೇ ಹಲವಾರು ಮಾಹಿತಿಗಳನ್ನು ಗಣಕೀಕರಣಗೊಳಿಸಲಾಗಿದ್ದು ಪಟ್ಟಣದ ನಾಗರೀಕರು ತಮ್ಮ ಬೆರಳ ತುದಿಯಲ್ಲಿ ಅವಶ್ಯ ಮಾಹಿತಿ ಪಡೆಯಬಹುದಾದ ಸೌಲಭ್ಯ ಒದಗಿಸಲಾಗಿರುತ್ತದೆ. 

ಕೆ.ಎಂ.ಆರ್.ಪಿ. ಗಣಕೀಕರಣ ಯೋಜನೆಯ ಕಿರು ಪರಿಚಯ:

ಪೌರಸುಧಾರಣಾ ಕೋಶದ ಮೇಲುಸ್ತುವಾರಿಯಲ್ಲಿ ಹೊಳಲ್ಕೆರೆ ಪಟ್ಟಣ ಪಂಚಾಯಿತಿಯಲ್ಲಿ ಹಲವಾರು ಗಣಕೀಕರಣ ಯೋಜನೆಗಳು ಪೂರ್ಣಗೊಂಡಿರುತ್ತವೆ ಹಾಗೂ ಇನ್ನು ಕೆಲ ಗಣಕೀಕರಣ ಯೋಜನೆಗಳು ಪ್ರಗತಿಯಲ್ಲಿದ್ದು ಶೀಘ್ರದಲ್ಲಿ ಮುಕ್ತಾಗೊಂಡು ಸಾರ್ವಜನಿಕರ ಉಪಯೋಗಕ್ಕಾಗಿ ಲಭ್ಯವಾಗಲಿವೆ.

ಈಗಾಗಲೇ ಬಹುತೇಕ ಮಾಹಿತಿಯನ್ನು ಕಛೇರಿ ವೆಬ್‌ ಸೈಟ್‌ನಲ್ಲಿ ಅಳವಡಿಸಲಾಗಿರುತ್ತದೆ.

  • ಕಛೇರಿ ವೆಬ್‌ಸೈಟ್: ಹೊಳಲ್ಕೆರೆ ಪಟ್ಟಣ ಪಂಚಾಯಿತಿಯು ತನ್ನದೇ ಆದ ವೆಬ್‌ಸೈಟ್ ಹೊಂದಿದ್ದು ಪಟ್ಟಣದ ಸಮಗ್ರ ಮಾಹಿತಿ ಇದರಲ್ಲಿ ಲಭ್ಯವಿರುತ್ತದೆ. ಕಛೇರಿಯ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಬಿಂಬಿಸುವ ಸದುದ್ದೇಶದಿಂದ ಪೌರಸುಧಾರಣಾ ಕೋಶ ಈ ವೆಬ್ ಸೈಟ್ ಅಭಿವೃದ್ಧಿ ಪಡಿಸಿದ್ದು ಹೊಳಲ್ಕೆರೆ ಪಟ್ಟಣ ಪಂಚಾಯಿತಿಯಿಂದ ಈ ವೆಬ್ ಸೈಟ್ ನಿರ್ವಹಣೆ ಮಾಡಲಾಗುತ್ತಿದೆ. ಪ್ರಮುಖವಾಗಿ ಸಿಬ್ಬಂದಿ ಮಾಹಿತಿ, ಕೌನ್ಸಿಲ್ ಮಾಹಿತಿ, ಚುನಾಯಿತ ಪ್ರತಿನಿಧಿಗಳ ಮಾಹಿತಿ, ಟೆಂಡರ್ ಮಾಹಿತಿ, ಸಾರ್ವಜನಿಕ ಪ್ರಕಟಣೆ ಕಾಯ್ದೆ, ಮಾಹಿತಿ ಹಕ್ಕು, ಘನತ್ಯಾಜ್ಯ ವಸ್ತು ವಿಲೇವಾರಿ, ಮಳೆ ನೀರು ಕೊಯ್ಲು ಪದ್ಧತಿ, ಪಟ್ಟಣದ ರಸ್ತೆ, ಬೀದಿ ದೀಪ, ಚರಂಡಿ ಇತ್ಯಾದಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳು, ಪಟ್ಟಣದ ಹಣಕಾಸು ಪದ್ಧತಿ ವಿವರ, ಆಯ ವ್ಯಯ, ಸಭಾನಡವಳಿಗಳು ಇನ್ನು ಹತ್ತು ಹಲವು ಉಪಯುಕ್ತ ಮಾಹಿತಿ ಈ ವೆಬ್ ತಾಣದಲ್ಲಿ ಲಭ್ಯವಿರುತ್ತದೆ.  ಪೌರ ಸುಧಾರಣಾ ಕೋಶದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿ ನಿರ್ವಹಿಸಲಾಗುತ್ತಿರುವ ಎಲ್ಲಾ ಆನ್‌ಲೈನ್ ಅಪ್ಲಿಕೇಷನ್‌ಗಳು ಈ ವೆಬ್ ತಾಣದಲ್ಲಿ ದೊರೆಯುವಂತಿದ್ದು ಪಟ್ಟಣದ ನಾಗರೀಕರು ಈ ತಾಣಕ್ಕೆ ಬೇಟಿ ನೀಡಿ ಅವಶ್ಯ ಮಾಹಿತಿ ಪಡೆಯಬಹುದಾಗಿರುತ್ತದೆ.
  • ಜನನ-ಮರಣ ದಾಖಲೆಗಳ ಆನ್ ಲೈನ್ ಅಪ್ಲಿಕೇಷನ್:ಪ್ರಥಮ ಹಂತದಲ್ಲಿ 1998ರಿಂದ ಇಲ್ಲಿಯವರೆಗಿನ ಪಟ್ಟಣದ ಎಲ್ಲಾ ಜನನ-ಮರಣ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದ್ದು ಸಾರ್ವಜನಿಕರಿಗೆ ಗಣಕೀಕೃತ ಜನನ-ಮರಣ ದಾಖಲಾತಿಗಳನ್ನು ವಿತರಿಸಲಾಗುತ್ತಿದೆ. ಪೌರಾಡಳಿತ ನಿರ್ದೇಶನಾಲಯದ ಆದೇಶದ ರೀತ್ಯ 1990ನೇ ಸಾಲಿನಿಂದ 1997ನೇ ಸಾಲಿನವರೆಗಿನ ಹಳೆಯ ಜನನ-ಮರಣ ದಾಖಲಾತಿಗಳ ಡಾಟಾ ಎಂಟ್ರಿ ಕಾರ್ಯ ಪೂರ್ಣಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರು ತ್ವರಿತವಾಗಿ ಜನನ-ಮರಣ ದಾಖಲಾತಿಗಳನ್ನು ಪಡೆಯುವಲ್ಲಿ ಸಹಕಾರಿಯಾಗಿದೆ.
  • ಪಿ.ಜಿ.ಆರ್. ಆನ್ ಲೈನ್ ಅಪ್ಲಿಕೇಷನ್: ಪಟ್ಟಣದ ನಾಗರೀಕರ ದೈನಂದಿನ ಅವಶ್ಯಕತೆಗಳಾದ ಬೀದಿ ದೀಪ, ಕುಡಿಯುವ ನೀರು, ಸ್ವಚ್ಚತೆ ಇತ್ಯಾದಿ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಕೇಂದ್ರ ಸ್ಥಾಪಿಸಲಾಗಿರುತ್ತದೆ.ಈ ಕುಂದುಕೊರತೆ ಪರಿಹಾರ ಕೇಂದ್ರವು ಪ್ರತಿ ದಿನ ಮುಂಜಾನೆ 8.00 ರಿಂದ ಸಂಜೆ 8.00ರ ವರಗೆ ಕಾರ್ಯ ನಿರ್ವಹಿಸುತ್ತದೆ.ಸಾರ್ವಜನಿಕರು ಕುಂದುಕೊರತೆ ಪರಿಹಾರ ಕೇಂದ್ರದ ಸಹಾಯ ವಾಣಿ:08191-275102ಕ್ಕೆ ಕರೆ ಮಾಡಿ ದೂರು ನೊಂದಾಯಿಸಿಕೊಳ್ಳಬಹುದಾಗಿದೆ ಅಲ್ಲದೆ ತಮ್ಮ ದೂರಿನ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಅದೇ ರೀತಿ ಈ ಕಛೇರಿ ವೆಬ್ ತಾಣಕ್ಕೆ ಬೇಟಿ ನೀಡಿ ಪಿ.ಜಿ.ಆರ್. ಆನ್‌ಲೈನ್ ಅಪ್ಲಿಕೇಷನ್ ಮುಖಾಂತರವೂ ದೂರು ನೊಂದಾಯಿಸಬಹುದಾಗಿರುತ್ತದೆ.ಅಥವಾ ನೇರವಾಗಿ ಕುಂದು ಕೊರತೆ ಪರಿಹಾರ ಕೇಂದ್ರಕ್ಕೆ ಬೇಟಿ ನೀಡಿ ದೂರು ನೊಂದಾಯಿಸಬಹುದಾಗಿರುತ್ತದೆ. ದೂರು ಸ್ವೀಕರಿಸಿದ ನಂತರ ಕುಂದು ಕೊರತೆ ಪರಿಹಾರ ಕೇಂದ್ರದ ನಿರ್ವಾಹಕರು ಒಂದು " Unique Complaint Tracking Number " ನೀಡುವರು. ಇದರ ಸಹಾಯದಿಂದ ನಾಗರೀಕರು ತಮ್ಮ ದೂರಿನ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ.ದೂರು ಪರಿಹಾರ ಕಾರ್ಯದ ಪ್ರತಿ ಹಂತದ ಸ್ಥಿತಿಯನ್ನು ಇ-ಮೇಲ್ ಮೂಲಕ ಸಹ ಇ-ಮೇಲ್ ವಿಳಾಸ ನೊಂದಾಯಿಸಿ  ಪಡೆಯಬಹುದಾಗಿರುತ್ತದೆ.
  • ಭೌಗೋಳಿಕ ಆಸ್ತಿ ತೆರಿಗೆ ಪದ್ಧತಿ ಅನುಷ್ಟಾನ ಕಾರ್ಯ:ಪೌರ ಸುಧಾರಣಾ ಯೋಜನೆಯಡಿ ಹೊಳಲ್ಕೆರೆ ಪಟ್ಟಣದಲ್ಲಿ ಭೌಗೋಳಿಕ ಆಸ್ತಿ ತೆರಿಗೆ ಪದ್ಧತಿ ಅನುಷ್ಟಾನ ಅತೀ ಪ್ರಮುಖ ಯೋಜನೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪಟ್ಟಣದ ಎಲ್ಲಾ ಆಸ್ತಿಗಳ ಸರ್ವೆಕಾರ್ಯ ಪೂರ್ಣಗಳಿಸಿ, ಆಸ್ತಿಗಳ ವಿವರ (ನಮೂನೆ "ಸಿ") ಡಾಟಾ ಎಂಟ್ರಿ ಮಾಡಿಸಿ ಪೌರ ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದ್ದು, ನಾಗರೀಕರು ತಮ್ಮ ಆಸ್ತಿ ವಿವರಗಳನ್ನು ಸ್ವಯಂ ಪರಿಶೀಲನೆ ಮಾಡಿ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವ ಸಲುವಾಗಿ ಈಗಾಗಲೇ ನಮೂನೆ "ಸಿ" ನಾಗರೀಕರ ಪ್ರತಿಯನ್ನು ಹಂಚಲಾಗಿದೆ. ಸಾರ್ವಜನಿಕ ಆಕ್ಷೇಪಣೆಗಳ ಪರಿಶೀಲನೆ ಹಾಗೂ ತಿದ್ದುಪಡಿ ಕಾರ್ಯ ಪೂರ್ಣಗೊಂಡ ನಂತರ ಶೀಘ್ರದಲ್ಲಿಯೇ ಪೌರ ಸುಧಾರಣಾ ಕೋಶದಿಂದ ಆನ್‌ಲೈನ್ ಮಾಡಲಾಗುವುದು.ಇದರಿಂದ ಪಟ್ಟಣದ ಆಸ್ತಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದ್ದು, ಆಸ್ತಿ ತೆರಿಗೆ ವಿವರ ಗಳನ್ನು ಸಹ ಸಾರ್ವಜನಿಕರು ಆನ್‌ಲೈನ್ ಮೂಲಕ ಪಡೆಯಬಹುದಾಗಿರುತ್ತದೆ ಹಾಗೂ ಆನ್ ಲೈನ್ ಮೂಲಕ ತೆರಿಗೆ ಆಸ್ತಿತೆರಿಗೆ ಪಾವತಿಸಬಹುದಾಗಿದ್ದು ಹೊಳಲ್ಕೆರೆ ಪಟ್ಟಣದ ನಾಗರೀಕರು ಶೀಘ್ರದಲ್ಲಿಯೇ ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ.
  • ನಿಧಿ ಆಧಾರಿತ ದ್ವಿ-ನಮೂದು ಸಂಚಯನ ಲೆಕ್ಕ ಪದ್ಧತಿ: ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಕಛೇರಿಯಲ್ಲಿ ನಿಧಿ ಆಧಾರಿತ ದ್ವಿನಮೂದು ಸಂಚಯನ ಲೆಕ್ಕ ಪದ್ಧತಿಯನ್ನು ಈಗಾಗಲೇ ಗಣಕೀಕರಣಗೊಳಿಸಲಾಗಿದ್ದು  ಈ ಆನ್‌ಲೈನ್ ಅಪ್ಲಿಕೇಷನ್‌ ಮುಖಾಂತರ ನಗರ ಸ್ಥಳೀಯ ಸಂಸ್ಥೆಯ ಎಲ್ಲಾ ಯೋಜನೆಗಳ ಆರ್ಥಿಕ ಅಂಕಿ ಅಂಶಗಳನ್ನು ಕಛೇರಿಯ ಲೆಖ್ಖಿಗರು ದಿನಂಪ್ರತಿ ಅಪ್‌ಡೇಟ್‌ ಮಾಡುತ್ತಿದ್ದು ಕಛೇರಿಯ ಆಯ-ವ್ಯಯದ ಸಮರ್ಪಕ ನಿರ್ವಹಣೆಗೆ ಸಹಕಾರಿಯಾಗಿದೆ. ಈ ಆನ್‌ಲೈನ್ ಅಪ್ಲಿಕೇಷನ್ ಮುಖಾಂತರ ವಾರ್ಷಿಕ ಕಾರ್ಯ ನಿರ್ವಹಣಾ ವರದಿಯನ್ನೂ ಸಹ ಪಡೆಯಬಹುದಾಗಿದ್ದು ಕಛೇರಿಯ ಎಲ್ಲಾ ಆರ್ಥಿಕ ಚಟುವಟಿಕೆಗಳ ವಿವರ ಕಛೇರಿ ವೆಬ್‌ಸೈಟ್ ಮೂಲಕ ಅಂತರ್ಜಾಲದಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತದೆ.
  • ಇತರೆ ಆನ್‌ಲೈನ್ ಅಪ್ಲಿಕೇಷನ್‌ಗಳು:  ಸಿ.ಎಂ.ಎಸ್.ಎಂ.ಟಿ.ಡಿ.ಪಿ, ಆಶಾಕಿರಣ ಮಾಹಿತಿ, ಎಸ್.ಜೆ.ಎಸ್.ಆರ್.ವೈ, ಎಸ್.ಎಲ್.ಬಿ, ನಮ್ಮ ಮನೆ ಇತ್ಯಾದಿ ಪ್ರಮುಖ ಆನ್ ಲೈನ್ ಅಪ್ಲಿಕೇಷನ್ ಗಳನ್ನು ಪೌರಸುಧಾರಣಾ ಕೋಶದ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಲಾಗಿದ್ದು ಕಛೇರಿಯ ಸುಲಭ ನಿರ್ವಹಣೆಗೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಈ ಆನ್‌ಲೈನ್ ಅಪ್ಲಿಕೇಷನ್‌ಗಳ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. 

ಈ ವೆಬ್ ಪುಟದ ನಿರ್ವಾಹಕರು:ಶ್ರೀ. ಬಿ.ಎಂ.ಎಸ್. ವೀರಯ್ಯ, ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯಿತಿ ಹೊಳಲ್ಕೆರೆ

ಅಂತಿಮ ತಿದ್ದುಪಡಿ ದಿನಾಂಕ: 17/04/2012



 


 


 


 


 

No. Of Visitors :
Last Updated   : 11/05/2012  Release History
Release 2.0.0, Powered By Karnataka Municipal Data Society & maintained by Holalkere TP
This website can best viewed with the resolution 1024 * 768 using Internet Explorer 7.0 or above.
Valid CSS!